Varsha Bhat

ಕಪ್ಪೆ ಚಿಪ್ಪು, ಹಕ್ಕಿ ಪುಕ್ಕ

ಮನೆ ಬಾಗಿಲಿನಿಂದ ಸ್ಪೂರ್ತಿ ಕಾನ್ವೆಂಟ್ ದೂರವೇನಲ್ಲ. ಅಪ್ಪನಿಗೆ ೨೦ ಹೆಜ್ಜೆಯಾದರೆ, ಅಪ್ಪನ ಕಿರುಬೆರಳು ಹಿಡಿದ ನನಗೆ ೪೦-೫೦ ಹೆಜ್ಜೆ. ನನ್ನ ಮೊದಲ ಶಾಲೆ. ಅಲ್ಲೇ ಮುಂದಿನ ೩ ವರ್ಷ ಕಳೆದೆ. ಒಂದನೇ ತರಗತಿಗೆ ಪಕ್ಕದ ಮನೆಯ ಪುಪ್ಪಿ* ಹೋಗುತ್ತಿದ್ದ ಶಾಲೆ ಸೇರಿದ್ದಾಯಿತು. ಹೊಸ ಶಾಲೆ ಮನೆಯಿಂದ ನಡೆದು ಹೋಗುವಷ್ಟು ಹತ್ತಿರವಿರಲಿಲ್ಲ. ಬರೋಬ್ಬರಿ ೨ಕಿಮೀ ದೂರ.

ಮನೆ ವಿಳಾಸ ಬದಲಾಯಿತು, ಅದರೊಂದಿಗೆ ಶಾಲೆಯೂ. ೧೦ ವರ್ಷದ ನನಗೆ ಪೆನ್ ಉಪಯೋಗಿಸುವ ಹೊಸ ಜವಾಬ್ದಾರಿಯ ಸಂಭ್ರಮ. ಇಷ್ಟರಲ್ಲಿ ಹೋದಲ್ಲೆಲ್ಲಾ ಹೊಸಬರೊಂದಿಗೆ ಮಾತಾಡುವ ಕಲೆ ಕರಗತವಾಗಿತ್ತು. ದಿನಂಪ್ರತಿ ೪ಕಿಮೀ ಹೋಗಿ ಬರುವುದು ಅಭ್ಯಾಸವಾಗಿತ್ತು.

೭ನೇ ಕ್ಲಾಸು ದಾಟಿ ಹೈಸ್ಕೂಲ್ ಮೆಟ್ಟಿಲು ಹತ್ತಿದಾಗ ಮತ್ತೊಂದು ಶಾಲೆ. ಈ ಬಾರಿ ತಮ್ಮನೂ ನನ್ನದೇ ಶಾಲೆ. ಬಸ್ಸಿನಲ್ಲಿ ೬ಕಿಮೀ ಹೋಗಿ ಬರುತ್ತಿದ್ದೆವು. ಶಾಲೆಯ ಮೊದಲ ಬ್ಯಾಚಿನಿಂದ ಉತ್ತೀರ್ಣಳಾದೆ. ಇದು ೧೦ ವರ್ಷ ಹಿಂದಿನ ಕತೆ.

ಕಾಲೇಜು ಸೇರಿದಾಗ ಮನೆಯಲ್ಲಿ ಬಸ್ ಪಾಸ್ ಮಾಡಿಸಲು ಅನುಮತಿ ಸಿಕ್ಕಿತು. ಕೆ ರ್ ವೃತ್ತದ ಯುವಿಸಿಈ ತುಂಬಾ ದೂರವೇನಲ್ಲ, ಆದರೆ ಕೆಲವೊಮ್ಮೆ ೨ ಗಂಟೆಗೂ ಹೆಚ್ಚು ಬಸ್ ಪ್ರಯಾಣ ಮಾಡಿದ್ದೂ ಉಂಟು.

ಕೆಲಸ ಶುರು ಮಾಡಿದಾಗ ೩೫ಕಿಮೀ ದಿನಚರಿಯಾಯಿತು. ಹೋಗಿ ಬರುವ ಆ ೨ಗಂಟೆಗಳು ಮನಸ್ಸಿನ ಆರಾಮಕ್ಕೆ ಅಗತ್ಯವಾದವು. ಹೀಗೆಯೇ ನನ್ನ ರೇಡಿಯಸ್ ಹೆಚ್ಚುತ್ತಾ ಹೋಯಿತು. ಮುಂದಿನ ಹೆಜ್ಜೆ - ಬೇರೆ ಊರು.

ಅಂದುಕೊಂಡಷ್ಟು ಸುಲಭವಿರಲಿಲ್ಲ.

ಎರಡು ಮೂರು ಸೂಟ್ ಕೇಸ್ ಗಳಲ್ಲಿ ೨೩ ವರ್ಷಗಳನ್ನು ತುಂಬಿಸುವುದು ಸಣ್ಣ ಮಾತೇ?

ಬೇಕಾದ್ದು ತುಂಬಿಸು, ಬೇಡದ್ದು ರಟ್ಟಿನ ಪೆಟ್ಟಿಗೆಯಲ್ಲಿ ಹಾಕಿ ಅಟ್ಟದ ಮೇಲಿಡು ಎಂಬ ಸೂಚನೆ ಸಿಕ್ಕಿತ್ತು. ಅಪ್ಪಣೆ ಎಂದು ಶುರು ಮಾಡಿದೆ.

ಮೊದಲಿಗೆ ಪ್ರೆಷರ್ ಕುಕ್ಕರ್, ನಂತರ ಬಟ್ಟೆ. ಚಳಿಗೆ ಸ್ವೆಟರ್. ಅಗತ್ಯ ಸಾಮಾನುಗಳು. ಎರಡು ಸೂಟ್ ಕೇಸ್ ಭರ್ತಿಯಾದವು. ಹಿಮದಲ್ಲಿ ನಡೆಯಲು ಶೂಗಳು. ಬೆರಳಿಗೆ ಕೈಗವಸು. ಕಿವಿಗೆ ಸ್ಕಾರ್ಫು. ಬೇಡದ ಬಟ್ಟೆಯೆಲ್ಲ ಎತ್ತಿಟ್ಟೆ. ಪುಸ್ತಕಗಳನ್ನೂ ಅಚ್ಚುಕಟ್ಟಾಗಿ ಜೋಡಿಸಿದೆ. ಸ್ವಲ್ಪ ಸಾಮಾನು ಬ್ಯಾಗಿಗೆ, ಇನ್ನು ಸ್ವಲ್ಪ ಪೆಟ್ಟಿಗೆಗೆ. ಬೇಕಾದ್ದು, ಬೇಡದ್ದು, ಎಲ್ಲ ಇತ್ಯರ್ಥ ಮಾಡಿದೆ.

ಆದರೆ ಮಿಕ್ಕಿದ್ದು?

ತಮ್ಮನೊಂದಿಗೆ ಜಗಳ ಮಾಡಿ ತಿಂದ ಚಾಕಲೇಟಿನ ಕವರುಗಳು, ನಮ್ಮ ಬೆಕ್ಕು ‘ಗುಬ್ಬಿ’ ಬೇಟೆಯಾಡಿ ತಂದ ಹಕ್ಕಿ ಗರಿಗಳು, ಪಣಂಬೂರು ಬೀಚಿನಿಂದ ಹೆಕ್ಕಿ ತಂದ ಚಿಪ್ಪುಗಳು. ಬೇಕಾದ್ದೋ? ಬೇಡದ್ದೋ?

ಹೃದಯ ಗಟ್ಟಿ ಮಾಡಿಕೊಂಡು ಚಾಕಲೇಟ್ ಕವರುಗಳನ್ನೆಲ್ಲ ಬಿಸಾಡಿದೆ. ಹಕ್ಕಿ ಗರಿಗಳನ್ನು ಪುಸ್ತಕಗಳ ಮಧ್ಯೆ ಅಡಗಿಸಿಟ್ಟೆ. ಚಿಪ್ಪುಗಳ ಜವಾಬ್ದಾರಿಯನ್ನು ತಮ್ಮನಿಗೆ ಒಪ್ಪಿಸಿದೆ. ಒಂದು ಚೀಲ ಹೆಗಲಿಗೇರಿಸಿ, ಇನ್ನೆರಡು ಕೈಯಲ್ಲಿ ಎಳೆದು, ತಿಳಿದವರಿಗೆ ಬೈ ಹೇಳಿ ಹೊರಟೆ.

ವಿಮಾನದಲ್ಲಿ ೧೪ ಗಂಟೆ ಕಳೆದು ಬಂದಿಳಿದದ್ದು ದೂರದ ಜೆನೀವಾದಲ್ಲಿ. ಚಿನ್ನಾರಿ ಮುತ್ತ ಸಿನಿಮಾದ ‘ಎಷ್ಟೊಂದ್ ಜನ’ ಹಾಡು ನೆನಪಾಯಿತು. ಹೊಸ ಊರು, ಹೊಸ ಭಾಷೆ. ಬೇರೆ ಬೇರೆ ಶಾಲೆಗಳಿಗೆ ಹೋಗಿ ಪಡೆದ ತರಬೇತಿ. ಬ್ಯಾಗಿನಲ್ಲಿ ಅಮ್ಮ ಕಳಿಸಿದ ಪ್ರೆಷರ್ ಕುಕ್ಕರ್, ಅಜ್ಜಿ ಮಾಡಿದ ಚಟ್ನಿ ಪುಡಿ. ನಾನೇ ಆಯ್ದು ತಂದ ಬಟ್ಟೆಬರೆ. ಸ್ವಿಟ್ಜರ್ಲ್ಯಾಂಡ್ ನ ಬಾರ್ಬರಾ ಅವರ ಮನೆಯಲ್ಲಿ ಮೊದಲ ತಿಂಗಳಿಗೆ ಸಿಕ್ಕಿದ ರೂಮು. ಕುಕ್ಕರ್ ಸೀಟಿಗೆ ಹೆದರುತ್ತಿದ್ದ ಅವರ ಪುಟ್ಟ ನಾಯಿ ಆನಿಕ್ಸ್. ಮೊದಲನೇ ಬಾರಿ ನೋಡಿದ ಕ್ರಿಸ್ಮಸ್ ವಿಜೃಂಭಣೆ. ಅದೆಷ್ಟೂ ರೀತಿಯ ಚೀಸ್. ಬೆಳಗೆದ್ದು ಮಾಡುತ್ತಿದ್ದ ವಿಡಿಯೋ ಕಾಲ್.

ಇನ್ನೇನು ೨ ವರ್ಷವೇ ಆಗುತ್ತಾ ಬಂತು. ಬಂದ ದಿನವೇ ಹಿಮ ಕಂಡ ಸಂಭ್ರಮ. ಮೊದಲ ದಿನ ಹತ್ತಿದ ಬಸ್ಸು, ೩ ಸೂಟ್ ಕೇಸ್ ಸಂಭಾಳಿಸಲು ಆಗದೇ ಇದ್ದಾಗ ಸಹಾಯ ಮಾಡಿದ ಅಪರಿಚಿತರು, ಪ್ರತಿ ನಿಮಿಷಕ್ಕೂ ಹೊಸದೇನೂ ಕಾಣಿಸಿ ತೆಗೆದ ಫೋಟೋಗಳು, ಅಚ್ಚಳಿಯದಂತೆ ನೆನಪಿವೆ.

ಇದೀಗ ಮನೆಯಿಂದ ಆಫೀಸು ೩೫ ನಿಮಿಷದ ನಡಿಗೆ. ಒಂದು ೪-೫ ಸಾವಿರ ಹೆಜ್ಜೆ ಇರಬಹುದೇನೋ?

*ಅವನ ಹೆಸರು ಪೃಥ್ವಿ ಎಂದು ತಿಳಿಯುವಷ್ಟರಲ್ಲಿ ಅವನಿಗೆ ಪುಪ್ಪಿ ಎಂಬ ಹೆಸರು ಅಂಟಿಹೋಗಿತ್ತು